ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಮತ್ತೆ ಮತ್ತೆ ಬಲ್ಲಾಳರು

ಲೇಖಕರು :
ಕೃಷ್ಣಪ್ರಕಾಶ ಉಳಿತ್ತಾಯ
ಗುರುವಾರ, ಒಕ್ಟೋಬರ್ 1 , 2015

ಪರಿಮಿತಿಯೊಳಗೆ ಅಪರಿಮಿತ ಕಲಾ ಸೌಂದರ್ಯಾಭಿವ್ಯಕ್ತಿಯನ್ನು ಸಾಧಿಸಲು ಹೊರಟವರ ನಡೆಯನ್ನು ನೋಡುವುದೇ ಒಂದು ರೋಚಕ ಅನುಭವ. ಇದೇ ಕಣ್ಣಿನಲ್ಲಿ ನಾನು ಚಿಪ್ಪಾರು ಕೃಷ್ಣಯ್ಯ ಬಲ್ಲಾಳರನ್ನು ನೋಡಬಯಸುವುದು. ಅಲ್ಲ, ಅವರೇ ನನ್ನಲ್ಲಿ ಜಿಗಿಜಿಗಿದು ಪುಟಿಪುಟಿದು ಮತ್ತೆ ಬರುತ್ತಾರೆ. ಹಾಗೆಂದು ಬಲ್ಲಾಳರೇನೂ ಪರಿಪೂರ್ಣ -ಕಲಾ ಸೌಂದರ್ಯಾಭಿವ್ಯಕ್ತಿಯ ತುತ್ತತುದಿಯೆಂದು ಹೇಳುವ ಅನುಭವ ನನಗಿಲ್ಲ. ಯಾಕೆಂದರೆ ನನ್ನ ಕೇಳ್ಮೆಯ ಪರಿಧಿಗೆ ದೊರಕದ ಬಲ್ಲಾಳರ ಗುರುಗಳೂ, ನನ್ನ ಪರಮಗುರುಗಳೂ ಆದ ಕುದುರೆಕೂಡ್ಲು ರಾಮ ಭಟ್ಟರ (ಹಿರಿಯ) ವಾದನ ವಿಸ್ಮಯ ಮತ್ತು ನಿಡ್ಲೆ ನರಸಿಂಹ ಭಟ್ಟರ ನುಡಿತದ ಸೌಂದರ್ಯ ಅನ್ಯಾದೃಶ ಎಂಬುದನ್ನು ಕೇಳಿಬಲ್ಲೆ. ಹೀಗಿದ್ದರೂ ನಮ್ಮ ನಾಡಿನ ಚಿಂತಕ ಲಕ್ಷ್ಮೀಶ ತೋಳ್ಪಾಡಿಯವರ ಉಕ್ತಿಯಂತೆ ""ಯಾರೂ ಶ್ರೇಷ್ಠರಲ್ಲ, ಯಾರೂ ಕನಿಷ್ಠರೂ ಅಲ್ಲ, ಎಲ್ಲರೂ ವಿಶಿಷ್ಟರೇ''. ನಾನು ಕಂಡ, ಕೇಳಿದ ಅನುಭವ ನನಗೆ ಸತ್ಯ; ಅಷ್ಟೆ.

ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು
ಚೆಂಡೆ ಮತ್ತು ಮದ್ದಳೆ ಭಾಗವತನ ಗಾನಕ್ಕೆ ಎರಡು ಬಗೆಯ ಕಾಣಿಕೆಗಳನ್ನು ನೀಡಬೇಕಾ ಗುತ್ತದೆ. ನಾಡಿನ ಶ್ರೇಷ್ಠ ಕಲಾ ವಿಮರ್ಶಕರಾದ ಜಿ.ಟಿ. ನಾರಾಯಣರಾಯರು ತಮ್ಮ ಶ್ರುತಗಾನ ಎಂಬ ಕಲಾವಿಮರ್ಶೆ ಪುಸ್ತಕದಲ್ಲಿ ಅದನ್ನು ಈ ರೀತಿ ಹೆಸರಿಸಿದ್ದಾರೆ - "ಸುನಾದ' ಮತ್ತು "ಸುಘಾತ'. ಗಾನದಲ್ಲಿ ಪ್ರಕಟವಾಗುವ ನಾದಕ್ಕೆ ಅವಶ್ಯವಾಗಿ ಕೊಡಬೇಕಾದ ನಾದಾವರಣಕ್ಕೆ ಸುನಾದ ಎನ್ನಬಹುದು. ತೆಂಕಿನ ಚೆಂಡೆ-ಮದ್ದಳೆಗಳ ರಚನೆ ಗಮನಿಸಿದಾಗ ಇವುಗಳಿಂದ ಸುನಾದ ಸಾಧ್ಯವೇ? ಸಾಧಿತವಾಗಬಹುದೇ? ಸಾಧಿತವಾಗಬಹುದಾದರೂ ಯಕ್ಷರಂಗದ "ಭಾಷೆ'ಗೆ ಪೂರಕವಾಗಿ ನಿಲ್ಲಬಹುದೇ? ಇಂತಹ ಸಂಶಯಗಳು ಮೂಡಿಬರುವುದು ಅಸಹಜವೇನಲ್ಲ. ಇನ್ನು ಸುಘಾತ ಗಾನದ ತಾಳಕ್ಕೆ ಲಯಯುಕ್ತವಾದ ನುಡಿರ್ಘಾತಗಳು, ಛಾಪು, ದಸ್ತು, ಧಾಂ, ಧೀಂ, ತೋಂ, ನಂ ಇತ್ಯಾದಿ ಇತ್ಯಾದಿ.

ಕರ್ಣಾಟಕೀ ಹಾಗೂ ಹಿಂದೂಸ್ತಾನೀ ಸಂಗೀತಕ್ಕೆ ಪೋಷಕವಾದ ಸುನಾದವನ್ನು ಒದಗಿಸುವ ಪಿಟೀಲು, ಸಾರಂಗಿ ಮತ್ತು ಹಾರ್ಮೋನಿಯಂ ಇತ್ಯಾದಿ ಯಕ್ಷಗಾನಕ್ಕಿಲ್ಲ. ಇದನ್ನು ತಂದರೂ "ಭಾಷೆ' ಅಡ್ಡ ಬರುತ್ತದೆಂಬ ಗಾಬರಿ. ಈ ಹಿನ್ನೆಲೆಯಲ್ಲಿ ಸುನಾದಯುಕ್ತವಾದ ಸುಘಾತಗಳನ್ನು ಒದಗಿಸುವ ಸಾಮರ್ಥ್ಯ ಚೆಂಡೆ ಮದ್ದಳೆಯಂತಹ ಅವನದ್ಧ ವಾದ್ಯಗಳಿಗೆ ಇದೆಯೆ? ಮತ್ತು ಇದ್ದಿದ್ದರೆ ವಾದಕನಲ್ಲಿರ ಬೇಕಾದ ಅಮೂರ್ತ ಕವಿತ್ವಕ್ಕೆ ಇದು ಬಂಧಿಯಲ್ಲವೆ? ವಾದಕನಲ್ಲಿರುವ ಗಾಯಕ ಹೊರಬಂದರೆ ಮಾತ್ರ ಇದು ಸಾಧಿತವಾಗುವ ಸಂಗತಿಯಲ್ಲವೆ? ಈ ಬಗೆಯ ಸಂಶಯಗಳಿಂದಲೇ ನಾನು ಬಲ್ಲಾಳರನ್ನು ನೋಡಬಯಸುವುದು.

ಬಲ್ಲಾಳರ ಮದ್ದಳೆಯೊಂದಿಗೆ ಹಿರಿಯ ಅಗರಿ ಶ್ರೀನಿವಾಸ ಭಾಗವತರ ಭಾಗವತಿಕೆಯ ಧ್ವನಿ ಸುರುಳಿಗಳನ್ನು ಕೇಳಿದ್ದೇನೆ. ಮದ್ದಳೆ ತಾಳಧರ್ಮೀಯದಂತೆ ಕೇಳಿಸಿದೆ. ಪದ್ಯದ ಛಂದಸ್ಸಿಗೆ, ಗಾನದ ಲಯಕ್ಕೆ ಪೂರಕವಾಗಿ ಭೋರ್ಗರೆಯುತ್ತ ಸಾಗುವ ವಾದನ ಕ್ರಮ. ಕಿರಿಯ ಬಲಿಪ ನಾರಾಯಣ ಭಾಗವತರೊಂದಿಗಿನ ವಾದನ ಕ್ರಮ- ಪರಂಪರೆಯ ನುಡಿತಗಳು ಮತ್ತು ಬಲಿಪರ ಗಾನದಲ್ಲಿರುವ ಮೌನಕ್ಕೆ ಸಂವಾದಿಯಾಗಿ ಸಾಗುವ ಮದ್ದಳೆಯ ಮಾತುಗಳು. ಎಡನೀರು ಶ್ರೀಗಳ ಭಾಗವತಿಕೆಯೊಂದಿಗಿನ ಬಲ್ಲಾಳರ ನುಡಿತದಲ್ಲಿ ನಾನು ಕಂಡ ವಿಶೇಷತೆ ಭಕ್ತಿರಸದ ಸ್ಥಾಯೀಭಾವ. ಹೆಚ್ಚಾ ಇಲ್ಲ , ಕಡಿಮೆಯೂ ಇಲ್ಲ. ಚೆಂಡೆ ಮತ್ತು ಮದ್ದಳೆಗಳಲ್ಲಿ ಪೀಠದ ಮೇಲಿರುವ ಗೌರವ ವ್ಯಕ್ತವಾಗುತ್ತಿತ್ತು. ಭಾಗವತಿಕೆಯೊಳಗಿನ ಮದ್ದಳೆ ಮತ್ತು ಚೆಂಡೆ ಬಲ್ಲಾಳರದ್ದು.

ಅಗರಿ ಶ್ರೀನಿವಾಸ ಭಾಗವತರು
ದಾಮೋದರ ಮಂಡೆಚ್ಚರೊಂದಿಗಿನ ಬಲ್ಲಾಳರ ವಾದನ ಕ್ರಮದಲ್ಲಿ ಸುನಾದಯುಕ್ತವಾದ ಸುಘಾತಗಳು ಅತ್ಯಂತ ಮೇಲ್ಮಟ್ಟದಲ್ಲಿರುತ್ತಿದ್ದವು. ಇದು ಮನೋಧರ್ಮೀಯ ಮದ್ದಳೆವಾದನ.

ಇನ್ನು , ಬಲ್ಲಾಳರ ನಿಕಟವರ್ತಿಗಳಾದ ಕಡತೋಕ ಮಂಜುನಾಥ ಭಾಗವತರೊಂದಿಗೆ ಬಲ್ಲಾಳರ ನುಡಿತದಲ್ಲಿ ಕಾಣುತ್ತಿದ್ದ ಅಂಶ ಇವು - ವಾದನ ಕ್ರಮ ತಾಳಧರ್ಮೀಯವೂ ಮನೋಧರ್ಮೀಯವೂ ಆಗಿರುತ್ತಿತ್ತು. ಇವರೊಂದಿಗೆ ಬಲ್ಲಾಳರ ನುಡಿತದಲ್ಲಿ ಸಖೀತ್ವ ಭಾವವೂ, ದ್ವಂದ್ವಗಾನ ಪ್ರವೃತ್ತಿಯೂ (ಮದ್ದಳೆಯೊಂದಿಗೆ) ಕೆಲವೊಮ್ಮೆ ತುಂಟತನವೂ ಕಾಣಿಸಿಕೊಳ್ಳುತ್ತಿತ್ತು. ಇದೆಲ್ಲವೂ ನನಗೆ ಒಂದು ರೀತಿಯ ಮನಃಪ್ರಸಾದವನ್ನು ಒದಗಿಸಿದೆ.

ಬಲ್ಲಾಳರ ತುಂಟತನಕ್ಕೊಂದು ಉದಾಹರಣೆ: ಇದು ಎಡನೀರು ಶ್ರೀ ಮಠದಲ್ಲಿ ನಡೆದ ಘಟನೆ. ಹಿರಿಯ ಅರ್ಥಧಾರಿಯೊಬ್ಬರು ಒಂದು ಪದಕ್ಕೆ ಒಂದು ಗಂಟೆಯ ಅರ್ಥ ಹೇಳಿದರಂತೆ. ಆಗಲೇ ಬಲ್ಲಾಳರು ಕೋಪಗೊಂಡಿದ್ದರು. ಅವರ ವ್ಯಗ್ರತೆ ಅಭಿವ್ಯಕ್ತಗೊಂಡದ್ದು ಮಾತ್ರ ತುಂಟತನದೊಂದಿಗೆ. ಅನಂತರದ ಪದ್ಯಕ್ಕೆ ಸಾಧಾರಣ ಇಪ್ಪತ್ತು ನಿಮಿಷದ ಅವಧಿಯ ಬಿಡಿತ ಚೆಂಡೆಯಲ್ಲಿ ನುಡಿಸಿದರಂತೆ. ಬಿಡಿತ ನುಡಿಸುತ್ತ ಅವರು ಹೀಗೆ ಹೇಳುತ್ತಿದ್ದರಂತೆ ""ನಮ್ಮಲ್ಲಿಯೂ ಸಾಹಿತ್ಯ ಉಂಟು'' ಎಂದು. ಈ ಸಂದರ್ಭದಲ್ಲಿ ಎಡನೀರು ಶ್ರೀಗಳ ಅನುಪಸ್ಥಿತಿ ಇತ್ತೆಂಬುದು ಬೇರೆ ವಿಚಾರ.

ಯಕ್ಷಗಾನ ಮದ್ದಳೆವಾದನದಲ್ಲಿ "ಛಾಪು' ಭಾಗವತನಿಗೆ ಆಧಾರ ಶ್ರುತಿಯ ಕೇಂದ್ರ ಮತ್ತು ವಾದನಕ್ಕೆ ಆತ್ಮವಿದ್ದಂತೆ. ಬಲ್ಲಾಳರ "ಛಾಪು' ಕೇವಲ ನಾದವನ್ನು ಮಾತ್ರ ಹೊಮ್ಮಿಸುತ್ತಿತ್ತು. ಅಪಶಬ್ದಗಳ ಲವಲೇಶವೂ ಇಲ್ಲ. ಅದೊಂದು ಸಿದ್ಧಿ. ಮದ್ದಳೆಯ ಎಡಭಾಗದಿಂದ ನುಡಿಸುವ "ಗುಂ'ಕಾರದ ನಾದ ಸೌಖ್ಯ ಮತ್ತು ಸೌಂದರ್ಯ ಅನ್ಯಾದೃಶ. ನಾನು ಕುತೂಹಲದಿಂದ ನಿರೀಕ್ಷಿಸುವ ಸಂದರ್ಭ ಬಲ್ಲಾಳರು ಅಷ್ಟತಾಳದಿಂದ ಉಡಾಫೆಗೆ ತಿರುಗಿದ ಮೇಲೆ ಅವರು ತಾಳಕ್ಕೆ ಒದಗಿಸುತ್ತಿದ್ದ "ಗುಂ' ಕಾರಯುಕ್ತವಾದ ನಡೆ. ಇದು ಗಾನದ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತಿತ್ತು. ಇನ್ನು ಬಲ್ಲಾಳರ ಉರುಳಿಕೆ, ನುಡಿಸಾಣಿಕೆಯಲ್ಲಿ ಅವರು ಕೊಡುತ್ತಿದ್ದ ತಾಡನ ಸಾಂದ್ರತೆ, ಅದರಿಂದ ಹೊಮ್ಮುತ್ತಿದ್ದ ಭಾವಪೋಷಕ ಗುಣಗಳು ಕೂಡ ನನ್ನಲ್ಲಿ ರೋಚಕ ಪರಿಣಾಮವನ್ನು ಮೂಡಿಸಿವೆ.

ಬಲ್ಲಾಳರ ವಾದನಕ್ರಮ ತೋರಿಕೆಗೆ ಸರಳವಾಗಿ ಕಂಡರೂ ಅತ್ಯಂತ ಸಂಕೀರ್ಣ ಲಯವಿನ್ಯಾಸದಿಂದ ಕೂಡಿದ ಮತ್ತು ಅತ್ಯಂತ ಆಳವಾದ ಭಾವಾವರಣವನ್ನು ನಿರ್ಮಿಸಬಲ್ಲ ಶೈಲಿ. ಗಾನಕ್ಕೆ ಸರಳವಾಗಿಯೇ ಆರಂಭವಾಗುವ ಬಲ್ಲಾಳರ ವರಸೆ ಗಾನ ಬೆಳೆದಂತೆ ಅದಕ್ಕೆ ಸಂವಾದಿಯಾಗಿ ಸಾಗುತ್ತಿತ್ತು. ನನಗೆ ಬಲ್ಲಾಳರು ಮುಖ್ಯವಾಗುವುದು ಅವರು ನುಡಿಸುತ್ತಿದ್ದ ಬಿಡಿತ ಗಳಿಂದ. ಅವರ ಬಿಡಿತಗಳು ಗಾನದ ಭಾವಕ್ಕೆ ಸ್ಪಂದಿಸುತ್ತಿದ್ದವು.

ಚಿಪ್ಪಾರು ಬಲ್ಲಾಳರ ಕೊನೆಯ ಕಾರ್ಯಕ್ರಮದ ದೃಶ್ಯವಾಳಿ
ಒಂದಂತೂ ಖಂಡಿತವಾಗಿ ಹೇಳಬಲ್ಲೆ- ಮದ್ದಳೆವಾದನ ಕ್ರಮದಲ್ಲಿ ಬಲ್ಲಾಳರು ಒಂದು ಪೀಳಿಗೆ ಮುಂದಿದ್ದರು. ಬಲ್ಲಾಳರು ಹಿರಿಯ ಬಲಿಪ, ಅಗರಿ ಭಾಗವತರುಗಳಿಗೆ ಹೇಗೆ ಪ್ರಸ್ತುತವಾಗಿದ್ದರೋ ಹಾಗೆಯೇ ಮೂರನೇ ತಲೆಮಾರಿನ ಜನಪ್ರಿಯ ಭಾಗವತರುಗಳಿಗೂ ಹಾಗೆಯೇ ಪ್ರಸ್ತುತವಾಗಿದ್ದರು. ಬಲ್ಲಾಳರ ವಾದನ ಕ್ರಮವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿದಾಗ ನನಗೆ ನಿಲುಕಿದ್ದು ಇಷ್ಟು - ಇವರ ವಾದನ ಯಾವುದೋ ಅಮೂರ್ತತೆಯೆಡೆಗೆ ತುಡಿಯುತ್ತಿತ್ತೆಂದು.

ಬಲ್ಲಾಳರ ಕೊನೆಯ ಕಾರ್ಯಕ್ರಮ ಬೆಂಗಳೂರು ಎಡನೀರು ಶಾಖಾ ಮಠದಲ್ಲಿ. "ಶಾಂಭವಿ ವಿಜಯ' ಪ್ರಸಂಗ. ನನ್ನ ಋಣ ನನ್ನನ್ನು ಅಲ್ಲಿಗೆ ಎಳೆದಿತ್ತು. ಅಂದು ನಾನು ಬಲ್ಲಾಳರಿಗೆ ಒತ್ತು ಮದ್ದಳೆಗಾರನಾಗಿ. ಅಂದಿನ ಅವರ ಶ್ರೇಷ್ಠ ದರ್ಜೆಯ ಚೆಂಡೆವಾದನ, ನಾನು ಚೆಂಡೆ ನುಡಿಸುವಾಗಿನ ಅವರ ಹುರಿದುಂಬಿಸುವಿಕೆ ಇವೆಲ್ಲ ನನ್ನಲ್ಲಿ ಬಲ್ಲಾಳರು ಮತ್ತೆ ಮತ್ತೆ ಜಿಗಿಯುವಂತೆ ಮಾಡುತ್ತದೆ.

ಬಲ್ಲಾಳರು ಕಾಲದೊಂದಿಗೆ ಲೀನವಾಗಿರಬಹುದು. ಆದರೆ ಈಗಿನ ಎಲ್ಲ ಯಕ್ಷಗಾನ ಅವನದ್ಧ ಕಲಾವಿದರ ಕಾಲದಲ್ಲಿ ಜೀವಂತವಾಗಿದ್ದಾರೆಂದೇ ನನ್ನ ಭಾವನೆ.

ಸಂಗೀತದ ಬಗ್ಗೆ ಮಾತಾಡುವಾಗ ಮಾತು ಸೋಲುತ್ತದೆ. ಕೊನೆಗೆ ಜಳ್ಳಾದ ಸಾಹಿತ್ಯಿಕ "ರೊಮ್ಯಾಂಟಿಕ್‌' ಪದಗಳನ್ನೇ ಅವಲಂಬಿಸಬೇಕಾಗುತ್ತದೆ ಅಥವಾ ಪ್ರಸಿದ್ಧ ಬರಹಗಾರ ಎಸ್‌. ದಿವಾಕರ್‌ ಅನ್ನುವಂತೆ ಕಾವ್ಯದಲ್ಲಿನ "ವಸ್ತು-ಪ್ರತಿರೂಪ'ಗಳನ್ನು ಅವಲಂಬಿಸಬೇಕಾಗುತ್ತದೆ. ಕೊನೆಗೆ ನನ್ನಲ್ಲಿ ಉಳಿಯುವುದು ರಷ್ಯಾದ ಬರಹಗಾರ ಚೆಕಾವ್‌ನ ವಾಣಿ ಮಾತ್ರ, ""ಬೆಳಂದಿಗಳ ಬಗ್ಗೆ ವರ್ಣಿಸಬೇಡ, ಬದಲು ಅದು ಗಾಜಿಗೆ ಬಿದ್ದಾಗ ಆಗುವ ಪ್ರತಿಫ‌ಲವನ್ನು ಅನುಭವಿಸು''.


*********************
ಕೃಪೆ : udayavani


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
Dinesh Uchil(10/1/2015)
Nanu manyara vadana halavu sala aswadisiddene. Hageye diwana,nedle yavaraddu kuda. Muvara shailiyalli bhinnate ide. Nanu keli savida hage, Muvaroo agraganyaru..adoor,delantamajalu,bhattaru..kooda..




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ